ನಿರಂಜನಮೂರ್ತಿ
	ಲಿಂಗವಂತರಲ್ಲಿ ಸರ್ವಸಂಗ ಪರಿತ್ಯಾಗ ಮಾಡಿದ. ಬ್ರಹ್ಮಚರ್ಯ ಮತ್ತು ವೈರಾಗ್ಯ ಜೀವನವುಳ್ಳ ವಿರಕ್ತರನ್ನು ಈ ಹೆಸರಿನಿಂದ ಕರೆಯುತ್ತಾರೆ. ವೀರಶೈವ ಸಿದ್ಧಾಂತ ಗ್ರಂಥಗಳಲ್ಲೂ ಶರಣರ ವಚನಗಳಲ್ಲೂ ಬರುವ ಹೆಸರುಗಳಲ್ಲಿದು ಪ್ರಮುಖವಾದ್ದು. ನಿರಂಜನಮೂರ್ತಿಗಳ ಮೂಲ ಪುರುಷ ಬಳ್ಳಿಗಾವಿಯ ಅಲ್ಲಮಪ್ರಭು. ಆತನ ಗುರು ಅನಿಮಿಷ ದೇವರು. ಆತನ ಪರಮಗುರು ನಂದಿಕೇಶ್ವರ. ಅನಂತರ ಬರುವವರು ಹರದನಹಳ್ಳಿಯ ಅನಾದಿಗಣೇಶ್ವರರು. ನಿರಂಜನಮೂರ್ತಿಗಳ ಪರಂಪರೆಯಲ್ಲಿ ಮೂರು ಸಾವಿರ ರಕ್ತರು, ಎಳು ಸಾವಿರ ಚರಮೂರ್ತಿಗಳು, ನೂರೊಂದು ಮಂದಿ ವಿರತಿಗಳು, ಏಳುನೂರ ಎಪ್ಪತ್ತುಮಂದಿ ಅಮರಗಣಂಗಳು ಆಗಿಹೋಗಿದ್ದಾರೆ. ಕರ್ನಾಟಕದಲ್ಲಿ ಪ್ರಸಿದ್ಧವಾಗಿರುವ ಕಲ್ಯಾಣದ ಶೂನ್ಯಸಿಂಹಾಸನದ ಪರಂಪರೆಯಲ್ಲಿ ಚಿತ್ರದುರ್ಗದ ಮುರುಘಾಮಠ, ಹುಬ್ಬಳ್ಳಿಯ ಮೂರು ಸಾವಿರ ಮಠ, ಗದುಗಿನ ತೋಂಟದಾರ್ಯ ಮಠ, ಉರುವಕೊಂಡದ ಕರಿಬಸವಸ್ವಾಮಿ ಮಠ-ಈ ನಾಲ್ಕು ಗುರುಮಠಗಳನ್ನು ನಿರಂಜನಮೂರ್ತಿಗಳ ಮೂಲ ಸ್ಥಾನವೆಂದು ಹೇಳಲಾಗಿದೆ. 

	ಹೆಣ್ಣು, ಹೊನ್ನು, ಮಣ್ಣುಗಳನ್ನು ಗೆದ್ದವನು, ಜನನಮರಣಗಳಿಗೆ ಅತೀತನಾದವನು ಅನಾದಿ ನಿರಂಜನಮೂರ್ತಿ ಎನಿಸುತ್ತಾನೆ.
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ